ಕೊಳ್ಳಿ ಎಸೆಯುವ ಯಂತ್ರ

ಪ್ರಾಚೀನ ಕಾಲದಲ್ಲಿ ದುರ್ಗರಕ್ಷಕರು ಉರಿಯುತ್ತಿರುವ ರಾಳದ ಪೀಪಾಯಿಗಳನ್ನೂ, ಪಂಜುಗಳಿರುವ 6'-12' ಉದ್ದದ ಬರ್ಜಿಗಳನ್ನೂ ಬಹುದೂರಕ್ಕೆ ಶತ್ರುಸೈನ್ಯದ ಮೇಲೆ ಎಸೆಯಲು ಬಳಸುತ್ತಿದ್ದ ಯಂತ್ರ. ಬೈಜಾಂಟೀನ್ ದೇಶದ ಗ್ರೀಕರು ಕಾನ್‍ಸ್ಟಾಂಟಿನೋಪಲ್ ಪಟ್ಟಣದ ಮುತ್ತಿಗೆಯಲ್ಲಿ ರಾಸಾಯನಿಕ ವಸ್ತುಗಳಿಂದುಂಟಾದ ಅಗ್ನಿಜ್ವಾಲೆಗಳನ್ನು ಹಡಗು ಮತ್ತು ಪಟ್ಟಣಗಳ ಮೇಲೆಸೆದು ಕಿಚ್ಚಿಡುತ್ತಿದ್ದರು. ಅಸ್ಸಿರಿಯನ್ನಿರು ದ್ರವರೂಪದ ಬೆಂಕಿಯನ್ನು ಎಸೆಯುತ್ತಿದ್ದರು. ರೋಮನರು ಸೈರಕ್ಯೂಸ್ ಕೋಟೆಯನ್ನು ಮುತ್ತಿದ್ದಾಗ ವಿಜ್ಞಾನಿ ಆರ್ಕಿಮಿಡೀಸ್ ಸೂರ್ಯಕಿರಣಗಳನ್ನು ಪ್ರತಿಫಲನಕಾರಿಯಿಂದ ಕೇಂದ್ರೀಕರಿಸಿ ಶತ್ರುಗಳ ಹಡಗಿಗೆ ಬೆಂಕಿ ಹೊತ್ತಿಸಿದ. 6" ( 8" ಗಾತ್ರದ 160 ಕನ್ನಡಿಗಳ ಜೋಡಣೆಯ ಪ್ರತಿಫಲನಕಾರಿಯಿಂದ 140' ದೂರದಲ್ಲಿಟ್ಟ ಸೀಸ ಕರಗುತ್ತದೆ. 160' ದೂರದಲ್ಲಿಟ್ಟ ಮರ ಸುಟ್ಟುಹೋಗುತ್ತದೆ. ಅನೇಕ ಶತಮಾನಗಳ ಕಾಲ ನೂರಾರು ಯುದ್ಧಗಳಲ್ಲಿ ಗಂಧಕ, ರಾಳ, ಇದ್ದಲು ಧೂಪ, ಸಣಬಿನ ನಾರು, ಕಲ್ಲೆಣ್ಣೆ (ನ್ಯಾಫ್ತಾ), ಪೆಟ್ರೋಲಿಯಮ್‍ಗಳ ವಿವಿಧ ಮಿಶ್ರಣಗಳಿಂದುಂಟಾದ ಅಗ್ನಿಜ್ವಾಲೆಗಳನ್ನು ಯಂತ್ರಗಳಿಂದ ಎಸೆಯಲಾಗುತ್ತಿತ್ತು. ಆಮೇಲೆ ಪೆಟ್ಲುಪ್ಪು, ಕರ್ಪೂರತೈಲಗಳನ್ನೂ (ಟರ್ಪೆನ್‍ಟೈನ್) ಸೇರಿಸಲಾಯಿತು. ಗಂಧಕ, ಚರಬ, ಪೆಟ್ಲುಪ್ಪು, ಟರ್ಪೆನ್‍ಟೈನ್ ಮತ್ತು ಆಂಟಿಮೊನಿಗಳಿದ್ದ ಕಾರ್ಕಸ್ ಎಂಬ ಮಿಶ್ರಣ ಘೋರ ಬೆಂಕಿಯನ್ನು ಉಂಟುಮಾಡುತ್ತಿತ್ತು. ಅದಕ್ಕೆ ಕಾಡು ಬೆಂಕಿ ಎಂಬ ಹೆಸರಿತ್ತು.

	ಏಳನೆಯ ಶತಮಾನದಲ್ಲಿ ಕ್ಯಾಲಿಕಸ್ ಎಂಬ ಕಾನ್‍ಸ್ಟಾಂಟಿನೋಪಲ್‍ನ ಶಿಲ್ಪಿ ಗ್ರೀಕ್ ಫೈರ್ ಎಂಬ ದ್ರವ ರೂಪದ ಬೆಂಕಿ ಮಿಶ್ರಣವನ್ನು ತಯಾರಿಸಿದ. ಅದನ್ನು ಸೈಫನ್ ಎಂಬ ಯಂತ್ರದಿಂದ ಹಡಗು ಪಡೆಗಳ ಮೇಲೆ ಎಸೆಯಲಾಗುತ್ತಿತ್ತು. ಅದರ ವಿಶೇಷ ಗುಣವೇನೆಂದರೆ ಅದರಲ್ಲಿ ಬಿಸಿ ಸುಣ್ಣವೂ (ಕ್ವಿಕ್ ಲೈಮ್) ಇದ್ದದ್ದರಿಂದ ಅದು ಸ್ವಲ್ಪ ನೀರು ತಗುಲಿದರೂ ವಿಪರೀತ ಕಾವನ್ನು ಉಂಟುಮಾಡಿ ಮಿಶ್ರಣ ತಂತಾನೇ ಬೆಂಕಿ ಹೊತ್ತಿಕೊಂಡು ಉರಿಯುವಂತೆ ಮಾಡುತ್ತಿತ್ತು. ಈ ಜ್ವಾಲೆಗೆ ತೇವದ ಕಿಡಿ ಮತ್ತು ಸಮುದ್ರದ ಕಿಡಿ ಎಂಬ ಹೆಸರುಗಳಿದ್ದುವು.

	ಈ ಮೂಲತತ್ವಗಳಿಗೆ ರಾಸಾಯನಿಕ ಸೂತ್ರಗಳನ್ನು ಪ್ರಯೋಗಿಸಿ ಆಧುನಿಕ ಕೊಳ್ಳಿ ಎಸೆಯುವ ಯಂತ್ರಗಳು ಆವಿಷ್ಕøತವಾದುವು. ಅವನ್ನು ಮೊದಲನೆಯ ಮತ್ತು ಎರಡನೆಯ ಜಾಗತಿಕ ಮಹಾಯುದ್ಧಗಳಲ್ಲಿ ಉಪಯೋಗಿಸಲಾಯಿತು. ಮೊಟ್ಟಮೊದಲು ಅವನ್ನು ಜರ್ಮನರು (1914-15) ವರ್ಡಂ ಯುದ್ಧದಲ್ಲಿ ಬಹು ಯಶಸ್ವಿಯಾಗಿ ಉಪಯೋಗಿಸಿದರು. ಫ್ರೆಂಚರು ಅವನ್ನು ಆಮೇಲೆ ಉಪಯೋಗಿಸಿದರು. ಅನಂತರ ಬ್ರಿಟಿಷರು ಅವನ್ನು ಸೊಮ್ಮೆ ಮತ್ತು ಜೆಬ್ರುಗ್ಗೆ ಕದನಗಳಲ್ಲಿ ಬಳಸಿದರು. ಅಮೆರಿಕನ್ನರು ಕೆಲವು ಮಾದರಿಗಳನ್ನು ವೃದ್ಧಿಪಡಿಸಿದರು.

	ಫ್ಲೇಂ ಪ್ರೊಜೆಕ್ಟರ್ ಅಥವಾ ಫ್ಲೇಂ ಥ್ರೋಅರ್ ಎಂಬ ಈ ಯಂತ್ರದ ರಚನೆಯಲ್ಲಿ ಮೂರು ಘಟಕಗಳಿವೆ: 1. ಭಾರವಾದ ಮತ್ತು ಹಗುರವಾದ ಎಣ್ಣೆಗಳ ಮಿಶ್ರಣವನ್ನು ಒಳಗೊಂಡಿರುವ ಪಾತ್ರೆ; 2. ಒತ್ತಡದ ಗಾಳಿ, ಯವಕ್ಷಾರಜನಕ ವಾಯು, ಇಂಗಾಲಾಮ್ಲ, ಮುಂತಾದ ಅನಿಲಗಳಿಂದ ತುಂಬಿದ ಬಲವಾದ ಪಾತ್ರೆ; 3. ಮುಸುಡಿಯಿರುವ ಕೊಳವಿ ಮತ್ತು ಬೆಂಕಿ ಹಚ್ಚಲು ಸಲಕರಣೆ. (1) ಮತ್ತು (2)ರ ಮಧ್ಯೆ ದ್ರವ ಮತ್ತು ಅನಿಲದ ಹರಿವನ್ನು ತನಗೆ ತಾನೇ ನಿಯಂತ್ರಿಸುವ ಕವಾಟವಿದೆ. (2) ಮತ್ತು ಮೂತಿಯ ಮಧ್ಯೆ ಬೆಂಕಿಹಚ್ಚುವ ಚಾಪುಕೀಲು ಇದೆ. ಇದನ್ನು ಒತ್ತಿದ ಕೂಡಲೇ ಕೊಳ್ಳಿಗಳು ಬಂದೂಕಿನ ಗುಂಡುಗಳಂತೆ ವೇಗವಾಗಿ ಹಾರಿಹೋಗುತ್ತವೆ. ಈ ಯಂತ್ರಗಳಲ್ಲಿ ಭಾರವಾದದ್ದು ಮತ್ತು ಕೈಯಲ್ಲಿ ಒಯ್ಯುವಂಥದ್ದು ಎಂದು ಎರಡು ನಮೂನೆಗಳಿವೆ. ಭಾರಯಂತ್ರಗಳಿಂದ ಕೊಳ್ಳಿಗಳನ್ನು 134 ಗಜ ದೂರಕ್ಕೂ ಹಗುರಯಂತ್ರಗಳಿಂದ 45 ಗಜದವರೆಗೂ ಹಾರಿಸಬಹುದು. ಒಂದು ಸಾರಿ ಮೂರು ಗ್ಯಾಲನ್ ತೈಲ ತುಂಬಿದರೆ 15-16 ಸಾರಿ ಹಾರಿಸಬಹುದು. ಮುಂದಕ್ಕೆ ನೂಕಲು ಅತ್ಯುತ್ತಮವಾದದ್ದು ಯವಕ್ಷಾರಕಜನಕ ವಾಯು. ಅದನ್ನು ಶುದ್ಧವಾಗಿಯಾಗಲೀ ವಾಯುವಿನ ಆಮ್ಲಜನಕದಿಂದ ಯಾಂತ್ರಿಕವಾಗಿ ಪ್ರತ್ಯೇಕಗೊಳಿಸಿಯಾಗಲೀ ಬಳಸಬಹುದು. ಮಾನೊಟೋವ್ ಕಾಕ್‍ಟೇಲ್ ಎಂಬ ಯಂತ್ರ ಎಸೆಯುವ ಕೊಳ್ಳಿಗಳು ಟ್ಯಾಂಕ್ ಮತ್ತು ಪೆಟ್ರೋಲ್‍ಗಳಲ್ಲಿ ಉರಿಯನ್ನು ಎಬ್ಬಿಸುತ್ತದೆ. 
(ಎಂ.ಜಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ